ಮಲ್ಲಿಗೆ ಕನ್ನಡ ಸಂಘದ ಸಂಭ್ರಮದ ಸಂಕ್ರಾಂತಿ ಹಬ್ಬ
ಡಿಫ್ಡಬ್ಲ್ಯೂ ಹಿಂದೂ ಟೆಂಪಲ್ ನಲ್ಲಿ ನಡೆದ ರಂಗು ರಂಗಿನ, ಸಂಭ್ರಮದ ಸಂಕ್ರಾಂತಿಯಲ್ಲಿ ಪಾಲುಗೊಂಡು ಸಂತಸದ ಹೊನಲು ಹರಿಸಿ ಕೀರ್ತಿಯುತರಾದ ನಮ್ಮ ಮಲ್ಲಿಗೆ ಸಂಘದ ಹೊಸ ಸಮಿತಿಯ ಮೊಟ್ಟ ಮೊದಲ ಹೊಸ ವರುಷದ ಹೆಮ್ಮೆಯ ಹೆಜ್ಜೆಗೆ ನನ್ನ ಅಭಿನಂದನೆಗಳು.

ಪ್ರಿಯ ಸ್ನೇಹಿತರೆ,
“ನೇಸರನು ತನ್ನ ಪಥವ ಬದಲಿಸುತಿರಲು ,
ಮಾಗಿಯ ಚಳಿ ಮಾಯವಾಗುತಿರಲು,
ತನು ಮನದಲ್ಲಿ ಹೊಸ ಚೈತನ್ಯ ಮೂಡಿತಿದೆ,
ಹೊಸ ಬೆಳೆ, ಹೊಸ ಕ್ರಾಂತಿ, ಜಗದಲಿ ಹರಡುತಿದೆ ಎಂಬ ಕವಿ ನುಡಿಯಂತೆ
ನಮ್ಮ ಮಲ್ಲಿಗೆ ಸಂಘದ ಅಧ್ಯಕ್ಷರಾದ ಶ್ರೀ.ವತ್ಸ ರಾಮನಾಥನ್ ಮತ್ತು ಸಮಿತಿಯವರು ಮಕರ ಸಂಕ್ರಾಂತಿಯನ್ನು ಆಚರಿಸುವ ಮೂಲಕ ತುಂಬು ಚೈತನ್ಯದೊಡನೆ ಹೊಸ ವರುಷದ ಹೊಸ ಪಥದೆಡೆಗೆ ,ಹೊಸ ಧ್ಯೇಯವಿಟ್ಟು ತಮ್ಮ ಸಂಘವನ್ನು ಕೊಂಡೊಯ್ಯುವಲ್ಲಿ ಯಶಸ್ವೀ ಹೆಜ್ಜೆ ಇಟ್ಟರೆಂದು ಹೇಳಲು ಹೆಮ್ಮೆಯಾಗುತ್ತದೆ .” ಯಥಾ ರಾಜ ತಥಾ ಪ್ರಜಾ ” ಎನ್ನುವಂತೆ ಮುಂದೆ ಅವರೊಡನೆ ಹೆಜ್ಜೆ ಹಾಕೋಣ.
ಮಕರ ಸಂಕ್ರಾಂತಿ ಹಬ್ಬದ ವಿಶೇಷ ನುಡಿಯಂತೆ ” ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು”, ಎಳ್ಳು ಬೆಲ್ಲ ಬೆರೆತಂತೆ, ಎಲ್ಲ ಗೆಳೆಯ ಗೆಳತಿಯರು ಬೆರೆತು, ಕಲೆತು,ನಕ್ಕು, ನಲಿದು ಸಂತೋಷದಿಂದ ಕಾಲ ಕಳೆಯಲು ಅವಕಾಶ ಮಾಡಿಕೊಟ್ಟು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದ ಮಲ್ಲಿಗೆ ಸಂಘಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ನಮ್ಮ ಎಲ್ಲ ಸದಸ್ಯರ ಪರವಾಗಿ ನಾನು ಅರ್ಪಿಸುತ್ತಿದ್ದೇನೆ.
ಪ್ರಕೃತಿಯಲ್ಲಿ ದೊರೆಯುವ ಸಂಪತ್ತು ವಿಶಶೇಷಗಳನ್ನು ಉಪಯೋಗಿಸಿಕೊಂಡು ನಮ್ಮಬದುಕನ್ನು ಸೂಕ್ತ ರೀತಿಯಲ್ಲಿ ತಿದ್ದಿಕೊಳ್ಳುವುದೇ ಹಬ್ಬಗಳ ಪರಮಾರ್ಥ ಎಂದರೆ ಖಂಡಿತ ತಪ್ಪಾಗಲಾರದು.ಸುಗ್ಗಿಯ ಸುಖವನ್ನು ಸಂತಸದಿಂದ ಸವಿಯುವ ಹಬ್ಬವೇ ಸಂಕ್ರಾಂತಿ.
ಮಕರ ಸಂಕ್ರಾಂತಿ ಸೌರಮಾನದ ಹಬ್ಬಕೂಡ. ” ಉತ್ತರಾಯಣದ ಹೆಬ್ಬಾಗಿಲ ತೋರಣ ,ಮಕರಸಂಕ್ರಮಣ” . ಧಾರ್ಮಿಕ ಮಹತ್ವದ ಉತ್ತರಾಯಣ ದೇವತೆಗಳಿಗೆ ಪ್ರಿಯ, ಮಂಗಳ ಕಾರ್ಯಕ್ಕೆ ಪ್ರಶಸ್ತ ಮತ್ತು ಮುಂದಿನ ಆರು ಮಾಸಗಳಿಗೆ ಸ್ವರ್ಗದ ಬಾಗಿಲು.
ಇದೆ ರೀತಿ ನಮ್ಮಮಲ್ಲಿಗೆ ಸಂಘದ ನೂತನ ಸಮಿತಿ ನಮ್ಮೆಲ್ಲರಿಗೂ ಪ್ರೀತಿಯಿಂದ ಬಾಗಿಲು ತೆರೆದು ಸ್ವಾಗತಿಸಿ, ಉಪಚರಿಸಿ,ಆಚರಿಸಿದ ಮೊಟ್ಟ ಮೊದಲ ಹಬ್ಬ ” ಸಂಭ್ರಮದ ಸಂಕ್ರಾಂತಿ”.
ಇದೆ ೨೦೧೭ರ ಜನವರಿ ೨೧ನೇ ತಾರೀಖಿನಂದು ಡಿಫ್ಡಬ್ಲ್ಯೂ ಹಿಂದೂ ದೇವಸ್ಥಾನದ ಕಲ್ಚರಲ್ ಹಾಲ್ ನಲ್ಲಿ ನಡೆದ ಮಕರ ಸಂಕ್ರಾಂತಿಯ ಒಂದು ಚಿಕ್ಕ ಪಕ್ಷಿನೋಟ.
ರಂಗು ರಂಗಾಗಿ ರಂಜಿತವಾದ, ಸಭಿಕರಿಂದ ತುಂಬಿದ ಸಭೆಯು ದೇವರ ಪ್ರಾರ್ಥನೆಯಿಂದ ಕಾರ್ಯಕ್ರಮವನ್ನು ಶುರುಮಾಡಿತು. ಸಂಕ್ರಾಂತಿ ಹಬ್ಬದ ವೈವಿದ್ಯಮಾನ ಮತ್ತು ವಿಶೇಷತೆಯನ್ನು ಅತಿ ಅದ್ಭುತವಾಗಿ ಶುದ್ಧ ಕನ್ನಡದಲ್ಲಿ ವರ್ಣಿಸಿದ ನಮ್ಮಸಂಘದ ಪುಟಾಣಿಗಳಾದ ಅರ್ನವ್ ಮತ್ತು ಅವನಿ ಯವರುಗಳಿಗೆ ತುಂಬು ಸಭೆಯಿಂದ ಸಿಕ್ಕ ಚಪ್ಪಾಳೆಗಳೇ ಹೃದಯಪೂರಕ ಆಶೀರ್ವಾದಗಳು ,ಅವರ ಪ್ರತಿಭೆ ಮತ್ತು ಕನ್ನಡ ಭಾಷಾ ಪ್ರೇಮಕ್ಕೆ ಸಿಕ್ಕ ಪುರಸ್ಕಾರಗಳು. ಸಭಿಕರೆಲ್ಲರೂ ಇನ್ನೂ ಸಂಕ್ರಾಂತಿಯ ಭಾವಾರ್ಥಗಳನ್ನು ಸವಿಯುತ್ತಿರುವಾಗಲೇ, ಸಂಗೀತದ ಝೇಂಖಾರ ಕಿವಿಯಲ್ಲಿ ಮೊಳಗಿತು.ಉತ್ಸುಕರಾದ ಸಭಿಕರ ಮನಸ್ಸನ್ನು ತನ್ನ ಕೋಗಿಲೆ ಕಂಠದಿಂದ ಸೆಳೆದ ಸ್ಪೂರ್ತಿಯ ಗಾಯಕ, ನಮ್ಮ ಸಂಘದ ಇನ್ನೊಂದು ಅತ್ಯದ್ಭುತ ಪ್ರತಿಭೆ ಪ್ರಣವ್ ಕಿಕ್ಕೇರಿ. “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ” ಎನ್ನುವುದಕ್ಕೆ ಸಾಕ್ಷಿ ನಮ್ಮ ಪ್ರಣವ್.ಅತಿ ಮಧುರವಾದ ಕನ್ನಡ ದೇವರನಾಮಕ್ಕೆ ರಂಗು ಕೊಟ್ಟ ಚಿ.ಜೈ ಅಪ್ಪಾಜಿಯವರ ಮೃದಂಗ ಮತ್ತು ಶ್ರೀ.ನರಸಿಂಹ ಕಿಕ್ಕೇರಿಯವರ ಪಿಟೀಲುವಾದನ ಸಭಿಕರೆಲ್ಲರನ್ನು ಸಂಗೀತದ ಸುಮಧುರ ಲೋಕಕ್ಕೆ ಕರೆದೊಯ್ಯಿತು. ಆ ಕರ್ನಾಟಕ ಸಂಗೀತದ ರಾಗ, ತಾಳಕ್ಕೆ ತಲೆತೂಗುತ್ತಿದ್ದ ಸಭಿಕರನ್ನು ಭಾವ ತುಂಬಿದ ಭಾವಗೀತೆಗಳಿಂದ ಭಾವನಾಲೋಕಕ್ಕೆ ಕರೆದೊಯ್ದ ಕೀರ್ತಿ ನಮ್ಮ ಯುವ ಪ್ರತಿಭೆ ಶ್ರೀ.ವಿಜಯೇಂದ್ರ ರಾವ್ ಅವರಿಗೆ ಸೇರಿತು.ತುಂಬು ಹೃದಯದಿಂದ,ನಸು ನಗೆಯಿಂದ,ಸಿಹಿಧ್ವನಿಯಿಂದ,ಭಾವಗೀತೆ ಗಳನ್ನು ಭಾವ ತುಂಬಿ, ಚಿತ್ರಗೀತೆಗಳಿಂದ ಸಭಿಕರೆಲ್ಲರನ್ನು ಕುಣಿಸಿ,ತಣಿಸಿ,ಮನತುಂಬಿ ಹಾಡಿ ಎಲ್ಲರ ಮನ ಗೆದ್ದ ನಮ್ಮಎದೆತುಂಬಿ ಹಾಡಿದೆನು ವಿಜೇತ,ವಿಜಯೇಂದ್ರ.
ಸಂಗೀತ ಮತ್ತು ಸಾಹಿತ್ಯಗಳು, ಎಳ್ಳುಬೆಲ್ಲದಂತೆ ಬೆರೆತು ಸಂಕ್ರಾಂತಿಯ ಹಬ್ಬಕ್ಕೆ ವಿಶೇಷ ಮೆರಗು ಕೊಟ್ಟು ಸಭಿಕರ ಮನ ಗೆದ್ದಿತು. ಈ ಸಂತಸದಲ್ಲೇ ಮುಳುಗಿದ್ದ ಎಲ್ಲರನ್ನು ಘಮಘಮಿಸಿ ಸ್ವಾಗತಿಸಿತು ಬಾಳೆಯೆಲೆಯ ಊಟ. ನಮ್ಮ ನಾಡನ್ನು ಬಿಟ್ಟು ಬಲು ದೂರ ಬಂದರೂ ಅಲ್ಲಿಯ ಸಂಪ್ರದಾಯ, ಆಚಾರ,ವಿಚಾರಗಳನ್ನು ಮರೆಯದಂತೆ ಮಾಡಿತು ಅತಿ ರುಚಿಯಾದ ಬಾಳೆಎಲೆಯ ಸಿಹಿ ಸಂಕ್ರಾಂತಿಯ ಸವಿಯಾದ ರಸದೌತಣ. ಅಂತೂ ಯಾವುದೇ ವಿಷಯದಲ್ಲೂ ಕಮ್ಮಿಯಾಗದ, ಮನ ತುಂಬಿದ ಆ ಸಂಕ್ರಾಂತಿ ಹಬ್ಬವನ್ನು ಆಚರಿಸಲು ಅವಕಾಶಮಾಡಿಕೊಟ್ಟ ನಮ್ಮ ಮಲ್ಲಿಗೆ ಕನ್ನಡ ನಾರ್ತ್ ಟೆಕ್ಸಾಸ್ ಸಂಘದ, ಮಲ್ಲಿಗೆಯ ಸುವಾಸನೆ ಎಲ್ಲೆಲ್ಲೂ ಪಸರಿಸಲಿ.
ಹೊಸ ವರುಷದ, ಹೊಸ ಪಥದಲಿ, ಹೊಸ ಹೆಜ್ಜೆ ಇಡುತ್ತಿರುವ ನಮ್ಮ ಹೊಸ ಸಮಿತಿಗೆ ಹೃದಯ ಪೂರ್ವಕವಾಗಿ ಶುಭಕೋರುವ,
ನಿಮ್ಮೆಲ್ಲರ ಗೆಳತೀ,
ರೇಖಾ ಪ್ರಕಾಶ್.