A write up by Haricharan

ಮಕರ ಸಂಕ್ರಾಂತಿ ಸ್ನೇಹ, ಪ್ರೀತಿ ಹಾಗು ಸಹಬಾಳ್ವೆಯನ್ನು ಪ್ರತಿನಿಧಿಸುವ ಹಬ್ಬ. ಈ ಸಂದರ್ಭದಲ್ಲಿ ಧಾರ್ಮಿಕ ತತ್ತ್ವಕ್ಕಿಂತ ಹೆಚ್ಚಾಗಿ ಗಮನಿಸಬೇಕಾದ ಅಂಶ ಮನುಷ್ಯ ಹಾಗು ಪ್ರಕೃತಿಯ ಸಂಬಂಧ. ಸುಗ್ಗಿಯ ಕಾಲವಾದ್ದರಿಂದ ಎಲ್ಲೆಲ್ಲೂ ಹೊಸ ಪಸಲು ಬಂದು ಜನರನ್ನು ಒಗ್ಗೂಡಿಸುವ ಎಲ್ಲರ ಮನಸಿನಲ್ಲಿ ಸಂತಸವನ್ನು ತುಂಬುವ ಕೆಲಸವನ್ನು ಮಾಡುತ್ತದೆ. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣದ ಪಥವನ್ನು ಹಿಡಿಯುವುದರೊಂದಿಗೆ ಎಲ್ಲರಲಿ ಹೊಸ ಚೈತನ್ಯವು ಮೈಗೂಡುತ್ತದೆ. ಡಲ್ಲಾಸ್ ನಗರದ ಕನ್ನಡಿಗರ ಪ್ರೀತಿಯ ಮಲ್ಲಿಗೆ ಕೂಟವು ಸಂಕ್ರಾಂತಿ ಹಾಗು ಭಾರತದ ಗಣತಂತ್ರ ದಿವಸವನ್ನು ಆಚರಿಸಲು ಜನವರಿ ೨೬ ರಂದು ಡಿ. ಫ್. ಡಬ್ಲ್ಯೂ ಏಕ್ತಾ ಮಂದಿರದ ಸಭಾಂಗಣದಲ್ಲಿ ಏರ್ಪಾಡು ಮಾಡಿತ್ತು. 

ಸಂಕ್ರಾಂತಿ ಸಂಭ್ರಮವು  ನಮ್ಮ ಕರ್ಮಭೂಮಿ ಹಾಗು ಜನ್ಮಭೂಮಿ ಎರಡರ ರಾಷ್ಟ್ರಗೀತೆಯನ್ನು ಸುಮುಧುರವಾಗಿ ಮಾಸ್ಟರ್ ಅರ್ಚಿತ್ ಶರ್ಮ ಹಾಡುವ ಮೂಲಕ ಆರಂಭಿಸಿದೆವು. ನಂತರ ಕುಮಾರಿ ಮೈಥಿಲಿ ಪ್ರತಾಪ್ ತಮ್ಮ ಸುಶ್ರಾವ್ಯವಾದ ಗಾಯನದಿಂದ ದೇವತಾ ಪ್ರಾರ್ಥನೆಯನ್ನು ಮಾಡಿ ಕಾರ್ಯಕ್ರಮ ಸುಗಮವಾಗಿ ಜರುಗಲು ಹಾಗು ಎಲ್ಲರಿಗು ಒಳಿತನು ಕೋರಿದರು. 

ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನು ಹೊತ್ತವರು ನಮ್ಮೆಲರಿಗೂ ಚಿರ ಪರಿಚತರಾದ ಶ್ರೀಯುತ ಕೇಶವ್ ಪ್ರಸಾದ್. ಅವರ ಕಾರ್ಯದಕ್ಷತೆ, ಮುಂದಾಳತ್ವದ ಪರಿಚಯ ನಮ್ಮಗೆ ಅಕ್ಕ ಸಮ್ಮೇಳನದಲ್ಲಿ ಆಗಿದ್ದರು ಇಲ್ಲಿ ನಮ್ಮಗೆ ಅವರ ವಾಕ್ ಪಟುತ್ವ ಹಾಗು ವೇದಿಕೆಯನ್ನು ನಿಯಂತ್ರಿಸುವ ಸಾಮರ್ಥ್ಯದ ಪರಿಚಯ ದೊರಕಿತು. 

ಇದೆ ಸಂದರ್ಭದಲ್ಲಿ ಶ್ರೀವತ್ಸ ಅವರು ತಾವು ಅಧ್ಯಕ್ಷರಾಗಿ ನಡೆದು ಬಂದ ಹಾದಿ ನೆನೆಯುತ್ತಾ  ಅವರ ನೇತೃತವದಲ್ಲಿ ಸಫಲವಾಗಿ ನಡೆದ ಅಕ್ಕ ೨೦೧೮ ರ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು. ಯುಗಾದಿ ೨೦೧೯ ರ ನಂತರ ನೂತನ ಆಡಳಿತ ಮಂಡಳಿ ಶೃಷ್ಟಿ ಆಗುವುದರ ಜೊತೆ ಚುನಾವಣೆ ಮೂಲಕ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಕಾರ್ಯವಿಧಾನದ ಬಗ್ಗೆ ವಿಸ್ತಾರವಾಗಿ ತಿಳಿಸಿದರು. 

ಸಂಕ್ರಾಂತಿ ಹಬ್ಬದ ವಿಶಿಷ್ಟತೆ ಎಲ್ಲರೊಂದಿಗೆ ಎಳ್ಳು ಬೆಲ್ಲವನು ತಿಂದು ಸಿಹಿ ಮಾತನು ಆಡುವುದು. ಅದರ ಪ್ರತಿಬಿಂಬವಂತೆ ಸ್ನೇಹ ಕೂಟವು ಜರುಗಿತು. ಇದು ನಮಗೆ ಪರಿಚಯವಿದವರ ಜೊತೆ ಕೆಲವು ಆತ್ಮೀಯ ಕ್ಷಣಗಳನ್ನು ಕಳೆಯುವುದರ ಜೊತೆ ನೂತನವಾಗಿ ಮಲ್ಲಿಗೆ ಕನ್ನಡ ಕೂಟಕೆ ಸದಸ್ಯರಾದವರ ಪರಿಚಯ ಹಾಗು ಹೊಸ ಸ್ನೇಹವನ್ನು ಬೆಸೆಯುವ ಕೆಲಸವೂ ಮಾಡಿತು. 

ನಮ್ಮ ಸಂಸ್ಕೃತಿಯ ಉತ್ತರಾಧಿಕಾರಿಗಳು ನಮ್ಮ ಮಕ್ಕಳೇ ಆಗಿರುತ್ತಾರೆ. ಅವರಿಗೆ ಹಬ್ಬದ ಮಹತ್ವ ಹಾಗು ವ್ಯಶೀಷ್ಟತೆ ತಿಳಿಹೇಳಿ ಅವರನ್ನು ಒಗ್ಗೂಡಿಸುವುದು ಮುಖ್ಯವಾಗಿರುತ್ತದೆ. ಕಾರ್ಯಕ್ರಮದ ಆಯೋಜಕರು ಇದನ್ನು ಗಮನದಲ್ಲಿ ಇರಿಸಿ ಮಕ್ಕಳಿಗಾಗಿ ಚಿತ್ರಕಲೆ ಹಾಗು ಬಣ್ಣ ತುಂಬುವ ಸ್ಪರ್ಧೆಯನ್ನು ಆಯೋಜಿಸಿದ್ದರು. ಮಕ್ಕಳು ಅತ್ಯಂತ ಉತ್ಸಾಹ ಹಾಗು ಸಂತಸದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯ ಪರಿಚಯವನ್ನು ಮಾಡಿ ಕೊಟ್ಟರು.

ಡಲ್ಲಾಸ್ ನಗರದ ಕನ್ನಡ ಸಮುದಾಯವು ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳನ್ನು ಹೊಂದಿದೆ. ಮಲ್ಲಿಗೆ ಸಂಘವು ಶ್ರೀವತ್ಸ ರಾಮನಾಥನ್ ಅವರ ಸಮರ್ಥ ನೇತೃತ್ವದಲ್ಲಿ ಕಾಲಾವಕಾಶ ದೊರೆತಾಗಲಲ್ಲ ಅಂತಹ ಸುಪ್ತ ಪ್ರತಿಭೆಗಳನು ಗುರುತಿಸಿ ಎಲ್ಲರ ಮುಂದೆ ತಂದಿಡುವ ಪ್ರಯತ್ನ ಸತತವಾಗಿ ಮಾಡುತ್ತಲೇ ಬಂದಿದೆ.ಈ ಸಲವೂ ಅಂತಹ ಸ್ಥಳೀಯ ಪ್ರತಿಭೆಗಳಿಂದ ರಸ ಸ್ವಾದವನ್ನು  ನಮ್ಮೆಲರಿಗೂ ನೀಡಿದವರು Dr. ನಳಿನಿ ನಾಗೇಂದ್ರ, ಅಪರ್ಣ ನರೇಂದ್ರ ಹಾಗು ಪ್ರಶಾಂತ್ ಕುಲ್ಕರ್ಣಿ. ಸಂಕ್ರಾಂತಿಯ ಹಬ್ಬವನ್ನು ಪ್ರತಿನಿಧಿಸುವ ಗೀತೆಯೊಂದಿಗೆ ಆರಂಭಿಸಿ, ಹಲವಾರು ಕನ್ನಡ ಚಲನಚಿತ್ರದ ಜನಪ್ರಿಯ ಯುಗಳ ಗೀತೆಗಳ ಧಾರೆಯನು ಹರಿಸಿ ಸುಮಾರು ಎರಡು ಗಂಟೆಗಳ ಕಾಲ ಎಲ್ಲರನು ಮನೋರಜಂಜಿಸಿದರು. ಇದಕ್ಕೆ ಅಚ್ಚರಿಯ ಅಂಶವೆಂಬಂತೆ ಸ್ವತಹ ವತ್ಸ ಅವರೇ ತಮ್ಮ ಗಾಯನ ಶಕ್ತಿಯ ಬಗ್ಗೆ ಹೊಸ ಸದಸ್ಯರಿಗೆ ಪರಿಚಯವನ್ನು ಕೊಟ್ಟರು. 

ಇಲ್ಲಿ ಮನಸ್ಸಿಗೆ ಮುದ ನೀಡುವಂತ ಸಂಗೀತದಿಂದ ಜನರು ತನ್ಮಯರಾಗಿದ್ದರೆ ಮತ್ತೊಂದೆಡೆ ಅಡುಗೆ ಸ್ಪರ್ಧೆಗಾಗಿ ಮನೆಯಿಂದ ಮಾಡಿ ತಂದ ಸಾಬೂದಾನ ಖಿಚ್ಡಿ,  ಮೆಂತ್ಯ ಸೊಪ್ಪಿನಭಾತ್, ರೈಸ್ ಭಾತ್ ಹಾಗು ಕ್ವಿನೋವ ಬಟ್ಲು ಇಡ್ಲಿ ಎಲ್ಲರ ಬಾಯಲ್ಲಿ ನೀರು ತಂದಿಟ್ಟಿತು. 

ನಮ್ಮ ಯಾವುದೇ ಹಬ್ಬದ ಒಂದು ಅವಿಭಾಜ್ಯ ಸಂಗತಿಯೆಂದರೆ ಊಟ ಹಾಗು ಆ ಪ್ರತ್ಯೇಕ ಹಬ್ಬಕೆ ತಯಾರಾಗುವ ಖಾದ್ಯಗಳು. ಸಂಕ್ರಾಂತಿ ಹಬ್ಬಕೆ ಎಲ್ಲರಿಗು ತಿಳಿದಿರುವಂತೆ ಸಹಜವಾಗಿ ತಯಾರಾಗುವುದು ಸಿಹಿ ಮತ್ತು ಕಾರ ಹುಗ್ಗಿ. ನಮ್ಮ ಸಂಕ್ರಾಂತಿಯ ಉತ್ಸವದ ಮತ್ತೊಂದು ವಿಶೇಷವೆಂದರೆ ಸುಮಾರು  ೩೦೦  ಕ್ಕೂ ಹೆಚ್ಚು ಜನರಿಗೆ  ಬಾಳೆ ಎಲೆಯ ಮೇಲೆ ಸಾಂಪ್ರದಾಯಿಕವಾಗಿ ಎಲ್ಲರಿಗು ಭೋಜನದ ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದರು. 

ಹೀಗೆ ನಮ್ಮ ಸಂಕ್ರಾಂತಿ ಸಡಗರವನ್ನು ವಿಜೃಂಭಣೆಯಿಂದ ಆಚರಿಸಿ ನಮ್ಮೆಲರ ಮನಸಿನಲ್ಲಿ ಹೊಸ ವರುಷಕ್ಕೆ ಶ್ರೀಕಾರವನು ಹಾಡಿದ ಎಲ್ಲ ಮಲ್ಲಿಗೆ ಸಂಘದ ಪದಾಧಿಕಾರಿಗಳಿಗೂ ಅಭಿನಂದನೆ ತಿಳಿಸುತ್ತಾ ಧನ್ಯವಾದವನ್ನು ಕೋರುವೆ. ನಾವೆಲ್ಲರೂ ಇನ್ನೂ ಉತ್ಸಕರಾಗಿ ಯುಗಾದಿ ಹಬ್ಬದ ಆಚರಣೆಯನ್ನು ಎದುರುನೋಡುವಂತ ಸ್ಪೂರ್ತಿಯೊಂದನು ತಂದು ಕೊಟ್ಟಿದೆ. 

ಎಲ್ಲರಲೂ ಪ್ರೀತಿ, ವಿಶ್ವಾಸ ತುಂಬಿ ಹರಿಯಲಿ ಎಂದು ಬಯಸುವೆ.

ಜೈ ಕರ್ನಾಟಕ ಮಾತೆ !

ನಿಮ್ಮ ಹರಿಚರಣ್