“ನಿರೀಕ್ಷೆ” ನನ್ನ ಮನದಾಳದಲ್ಲಿ ಉಳಿದ ಹೃದಯಸ್ಪರ್ಶ ಅನುಭವ.

“ನಿರೀಕ್ಷೆ” ನನ್ನ ಮನದಾಳದಲ್ಲಿ ಉಳಿದ ಹೃದಯಸ್ಪರ್ಶ ಅನುಭವ.

ನಾನು ನಂದಿನಿ ಕಂಬಿ, ಮಲ್ಲಿಗೆ ಸಂಘದ ಕಾರ್ಯದರ್ಶಿ, ಸಂಘದ ಪ್ರತಿನಿಧಿಯಾಗಿ, ಕಳೆದ ಡಿಸೆಂಬರ್ನಲ್ಲಿ ಒಂದು ದಿನ ಮೈಸೂರಿನಲ್ಲಿರುವ “ನಿರೀಕ್ಷೆ” ಶಾಲೆಗೆ ಭೇಟಿ ಕೊಟ್ಟೆ. ಆ ಶಾಲೆಯ ಸ್ಥಾಪಕರಾದ ಶ್ರೀ.ಪ್ರವೀಣ್ ಕೃಪಾಕರ್ ಮತ್ತು ಶ್ರೀಮತಿ. ಹೇಮಾ ಕೃಪಾಕರ್ ಅವರು ನನಗೆ ಬಹಳ ಆದರಣೀಯ ಸ್ವಾಗತ ನೀಡಿದರು. ನನಗೆ ಆಶ್ಚರ್ಯವಾದ ಸಂಗತಿಯೇನೆಂದರೆ, ಈ ಶಾಲೆಯ ಬಗ್ಗೆ ನನ್ನ ಕಲ್ಪನೆ ಬಹಳ ಬೇರೆಯೇ ಆಗಿತ್ತು. ಈ ಅತೀ ಸಣ್ಣ ಜಾಗದಲ್ಲಿ, ಸಣ್ಣ ಸಣ್ಣ ಕೊಠಡಿಯಂತಿರುವ ತರಗತಿಗಳಿಂದ ಕೂಡಿರುವ ಚಿಕ್ಕ ಶಾಲೆ “ನಿರೀಕ್ಷೆ” ಯಲ್ಲಿ ಹೃದಯ ಶ್ರೀಮಂತಿಕೆ ತುಂಬಿದ, ಅತ್ಯುನ್ನತ ಸೇವಾ ಮನೋಭಾವ ಹೊಂದಿರುವ ಈ ದಂಪತಿಯರು ಸುಮಾರು ನೂರು ಮಾನಸಿಕ ದುರ್ಬಲರಾದ ಮಕ್ಕಳಿಗೆ ಉತ್ತಮ ತರಬೇತಿಯನ್ನು ನೀಡುವುದರಲ್ಲಿ ಯಶಸ್ವಿ ಆಗಿರುವುದನ್ನು ನೋಡಿ, ನಾನು ಭಾವನಾತ್ಮಕಳಾದೆ .
ನಿಮ್ಮೆಲ್ಲರಿಗೂ ತಿಳಿದಂತೆ ಸಂಘದ ಸದಸ್ಯರುಗಳೆಲ್ಲ ಸೇರಿ ಒಂದು ವರ್ಷದಿಂದ “ನಿರೀಕ್ಷೆ” ಗೆ ದಾನರೂಪಕವಾಗಿ ನೀಡಿದ ಧನವನ್ನು ನಾನು ಚೆಕ್ ಮೂಲಕವಾಗಿ ನೀಡಲು ಈ ಶಾಲೆಗೆ ಹೋದೆ. ನಾವು ಸಂಗ್ರಹಿಸಿದ ಆರುಸಾವಿರ ಡಾಲರ್ ಗಳು ಅವರಿಗೆ ದೊಡ್ಡ ಮಟ್ಟಕ್ಕೆ ಸಹಾಯವಾಗುತ್ತಿದೆಯೆಂದು ನಿಮಗೆ ತಿಳಿಸಲು ಇಚ್ಛಿಸುತ್ತೇನೆ. ಅವರಿರುವ ಈ ತಾತ್ಕಾಲಿಕ ಸಣ್ಣ ಕಟ್ಟಡವನ್ನು ಶೀಘ್ರದಲ್ಲೇ ಬಿಟ್ಟುಬಿಡಬೇಕಾದ ಪರಿಷ್ಟಿತಿ ಎದುರಾಗಿದೆ. ಅವರಿಗೆ ದೊರೆತಿರುವ ಒಂದು ಸೈಟ್ ನಲ್ಲಿ ಹೊಸ ಕಟ್ಟಡ ಕಟ್ಟುವ ಯೋಜನೆಗೆ ತಗಲುವ ವೆಚ್ಚ ಆರು ಲಕ್ಷ ರೂಪಾಯಿಗಳು. ನಮ್ಮೆಲ್ಲರ ದಾನ ಧನ ಅವರಿಗೆ ಬಹಳ ಉಪಯೋಗಕ್ಕೆ ಬರುತದೆಯೆಂದು ತಿಳಿಸಲು ನನಗೆ ಬಹಳ ಹೆಮ್ಮೆಯಾಗುತ್ತದೆ .ನಿಮ್ಮೆಲ್ಲರಿಗೂ ಸಂಘದ ಪರವಾಗಿ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನಾನು ಶಾಲೆಗೆ ಹೋದೊಡನೆಯೇ ನನಗೆ ಸಂಭ್ರಮದ ಕಾರ್ಯಕ್ರಮ ಏರ್ಪಾಡುಮಾಡಿದ್ದು ನನಗೆ ಸಂತಸ ತಂದಿತ್ತು . ಶ್ರೀ.ಪ್ರವೀಣ್ ಅವರು ನನ್ನನ್ನು ಪ್ರತೀ ತರಗತಿಗಳಿಗೂ ಕರೆದೊಯ್ದು, ಅಲ್ಲಿ ಮಕ್ಕಳಿಗೆ ಕೊಡುತ್ತಿರುವ ತರಭೇತಿಯ ಬಗ್ಗೆ ವಿವರಿಸಿದರು.ಮಕ್ಕಳ ಮಾನಸಿಕ ಬೆಳವಣಿಗೆಯ ಹಂತಕ್ಕೆ ಅನುಗುಣವಾಗಿ ತರಗತಿಗಳನ್ನು ನಿರ್ಮಿಸಲಾಗಿದೆ. ನಾನು ಮುಖ್ಯವಾಗಿ ಗಮನಿಸಿದಂತೆ ಬಹುತೇಕ ಮಕ್ಕಳು ಡೌನ್ ಸಿಂಡ್ರೋಮ್ನಿಂದ ಬಳಲುತ್ತಿದ್ದರು. ಕಾರ್ಯಕ್ರಮ ಪ್ರಾರಂಭವಾದಾಗ , ಆ ಮುಗ್ಧ ಮಕ್ಕಳು ಹಾಡು ಹಾಡಿ, ಚಿತ್ರದ ಸನ್ನಿವೇಶಗಳನ್ನು ವಿವರಿಸಿದ ರೀತಿ ಅಚ್ಚರಿಯೆನಿಸಿತು. ನನಗೂಕೂಡ ಪ್ರವೀಣ್ ಅವರು ಸಂಘದ ಬಗ್ಗೆ ಮಾತನಾಡಿ ಒಂದು ಹಾಡನ್ನು ಹಾಡಲು ವಿನಂತಿಸಿಕೊಂಡರು.

ನನ್ನ ಅಚ್ಚು ಮೆಚ್ಚಿನ ಕವಿ ಶ್ರೀ. ಶಿವರುದ್ರಪ್ಪನವರ ಕವನ “ಎಲ್ಲೋ ಹುಡುಕಿದೆ ಇಲ್ಲದ ದೇವರ ” ಹಾಡಿದಾಗ , ಕಿವಿಗೊಟ್ಟು ಕೇಳಿ, ಆನಂದಿಸಿ ಚಪ್ಪಾಳೆ ತಟ್ಟಿ ಅಭಿನಂದಿಸಿದ ಈ ಮುಗ್ಧ ಮಕ್ಕಳೇ ನನಗೆ ಸಿಕ್ಕಿದ ಅತ್ಯುತ್ತಮ ಪ್ರೇಕ್ಷಕರು. ಇದು ನನಗೆ ಮರೆಯಲಾಗದ ಅನುಭವ. ನಾನು ಅಲ್ಲಿ ಶ್ರದ್ದೆ ಮತ್ತು ಪ್ರೀತಿಯಿಂದ ಸೇವೆಸಲ್ಲಿಸುತ್ತಿರುವ ಎಲ್ಲ ಶಿಕ್ಷಕರಿಗೂ ಧನ್ಯವಾದಗಳನ್ನು ಅರ್ಪಿಸಿದೆ. ಅದರ ಪ್ರತಿಯಾಗಿ ಅವರೆಲ್ಲರೂ ಕೂಡ ನಾ ವು ಕೊಟ್ಟ ಕಿರುದಾನಕ್ಕೆ ಹಲವಾರು ಬಾರಿ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದ ನಂತರ ಸವಿಯಾದ ತಿಂಡಿ ಊಟದ ಉಪಚಾರ ಕೂಡ ಭರ್ಜರಿಯಾಗಿತ್ತು. ಮಕ್ಕಳು ಬೆಳೆಸಿದ ಮಾವಿನ ಸಸಿ, ಮಕ್ಕಳೇ ಮಾಡಿದ್ದ ಫೋಟೋ ಫ್ರೇಮ್ ಅನ್ನು ಉಡುಗರೆಯಾಗಿ ನೀಡಿ, ನನ್ನನ್ನು ಅಲ್ಲಿಂದ ಸಂತಸದಿಂದ ಭೀಳ್ಕೊಟ್ಟರು.

ನನಗಾದ ಈ ಅನುಭವದಿಂದ , ನಾನು , ನಿಮ್ಮೆಲ್ಲರಿಗೂ ಹೇಳುವುದೇನೆಂದರೆ , ಮುಂದಿನ ಬಾರಿ ನಿಮ್ಮ ಕರ್ನಾಟಕ ಪ್ರವಾಸದಲ್ಲಿ ಕನಿಷ್ಠ ಒಂದು ದಿನವನ್ನು “ನೀರಿಕ್ಷೆ” ಗಾಗಿ ಮುಡಿಪಿಡಿ.

” ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ….ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ………………………..”ಈ ಮುಗ್ಧ ಮಕ್ಕಳಲ್ಲೇ ನಾನು ಕಾಣದ ದೇವರನ್ನು ಕಂಡೆ .

ಈ ಹೃದಯ ಸ್ಪರ್ಶ ಅನುಭವ ಪಡೆದ ಈ “ನಿರೀಕ್ಷೆ” ಯ ಭೇಟಿ ನನಗೆ ಸಾರ್ಥಕತೆ ನೀಡಿತು .